Click

2012 ഡിസംബർ 4, ചൊവ്വാഴ്ച

ಇಸ್ರೇಲ್‌ನಿಂದ ಅಕ್ರಮ ವಸತಿ ನಿರ್ಮಾಣ ಕುರಿತು ವಿಶ್ವಸಂಸ್ಥೆ ಕಳವಳ

ಇಸ್ರೇಲ್‌ನಿಂದ ಅಕ್ರಮ ವಸತಿ ನಿರ್ಮಾಣ ಕುರಿತು ವಿಶ್ವಸಂಸ್ಥೆ ಕಳವಳ
 

ವಿಶ್ವಸಂಸ್ಥೆ,ಡಿ.3: ಆಕ್ರಮಿತ ಫೆಲೆಸ್ತೀನ್ ಪ್ರಾಂತದಲ್ಲಿ ಮೂರು ಸಾವಿರಕ್ಕೂ ಅಧಿಕ ವಸಾಹತು ಘಟಕಗಳನ್ನು ನಿರ್ಮಿಸುವ ಇಸ್ರೇಲ್‌ನ ಯೋಜನೆಯ ಬಗ್ಗೆ ವಿಶ್ವಸಂಸ್ಥೆ ಭಾರೀ ಕಳವಳ ವ್ಯಕ್ತಪಡಿಸಿದೆ.
ಇಸ್ರೇಲ್‌ನ ನೂತನ ವಸಾಹತು ಯೋಜನೆಯ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಭಾರೀ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಸ್ರೇಲ್ ಆಡಳಿತವು ಅತಿಕ್ರಮಿಸಿರುವ ವಿವಾದಾತ್ಮಕ ಪ್ರದೇಶ ಇ-1 ಪ್ರದೇಶ ಸೇರಿದಂತೆ ಜೆರುಸಲೇಂ ಹಾಗೂ ಪಶ್ಚಿಮದಂಡೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಘಟಕಗಳನ್ನು ನಿರ್ಮಿಸಲು ಇಸ್ರೇಲ್‌ನ ಯೋಜನೆ ಉದ್ದೇಶಿಸಿದೆ ಎನ್ನಲಾಗಿದೆ. ಫೆಲೆಸ್ತೀನ್‌ಗೆ ಹೆಚ್ಚಿನ ಮಾನ್ಯತೆ ನೀಡುವ ನಿರ್ಣಯವನ್ನು ಕಳೆದ ಗುರುವಾರ ವಿಶ್ವಸಂಸ್ಥೆಯಲ್ಲಿ ಅಂಗೀಕಾರಗೊಂಡ ಬೆನ್ನಲ್ಲೇ, ಆಕ್ರಮಿತ ಫೆಲೆಸ್ತೀನ್ ಪ್ರಾಂತದಲ್ಲಿ ನಿರ್ಮಾಣ ಯೋಜನೆಯೊಂದನ್ನು ಪ್ರಕಟಿಸಿದೆ.
ಆಕ್ರಮಿತ ಪ್ರಾಂತದಲ್ಲಿ ಇಸ್ರೇಲ್ ಹಮ್ಮಿಕೊಳ್ಳಲಿರುವ ನೂತನ ವಸಾಹತು ಯೋಜನೆಯು ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವಿನ ಶಾಂತಿ ಒಪ್ಪಂದದ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಬಾನ್ ಕಿ ಮೂನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್‌ನ ವಿಸ್ತರಣಾ ಯೋಜನೆಯು ಆತಂಕಕಾರಿಯಾಗಿದೆ ಎಂದು ಇದೇ ವೇಳೆ ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕ್ಯಾಥರಿನ್ ಆ್ಯಶ್ಟನ್ ಎಚ್ಚರಿಸಿದ್ದಾರೆ.
‘‘ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಇಸ್ರೇಲ್‌ನ ಯೋಜಿತ ನಿರ್ಮಾಣ ಕಾರ್ಯವು ಅಕ್ರಮವಾಗಿದೆ’’ ಎಂದು ಬಾನ್ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇಸ್ರೇಲ್ ಹಾಗೂ ಫೆಲೆಸ್ತೀನ್ ನಡುವಿನ ಮಾತುಕತೆಯನ್ನು ಪುನರಾರಂಭಿಸುವಂತೆ ಕರೆ ನೀಡಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಪ್ರಚೋದನಾತ್ಮಕ ವರ್ತನೆಯಿಂದ ದೂರವಿರುವಂತೆ ಉಭಯ ಪಕ್ಷಗಳನ್ನೂ ವಿನಂತಿಸಿಕೊಂಡಿದ್ದಾರೆ ಎಂದು ಹೇಳಿಕೆ ವಿವರಿಸಿದೆ.
2010ರಲ್ಲಿ ಅತಿಕ್ರಮಿತ ಪ್ರದೇಶಗಳಲ್ಲಿ ವಸಾಹತು ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಇಸ್ರೇಲ್ ತಿರಸ್ಕರಿಸಿದ್ದ ಕಾರಣ ಉಭಯ ಪಕ್ಷಗಳ ನಡುವಿನ ಮಾತುಕತೆ ಮುರಿದು ಬಿದ್ದಿತ್ತು. 1967ರ ಬಳಿಕ ಪಶ್ಚಿಮದಂಡೆ ಹಾಗೂ ಜೆರುಸಲೇಂ ಪ್ರಾಂತಗಳಲ್ಲಿ ಇಸ್ರೇಲ್ ನಿರ್ಮಿಸಿರುವ 120ಕ್ಕೂ ಅಧಿಕ ನೆಲೆಗಳಲ್ಲಿ ಐದು ಲಕ್ಷಕ್ಕೂ ಅಧಿಕ ಇಸ್ರೇಲಿಗಳು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

അഭിപ്രായങ്ങളൊന്നുമില്ല:

ഒരു അഭിപ്രായം പോസ്റ്റ് ചെയ്യൂ